ಮನೆಯಲ್ಲಿ ಪುರುಸೊತ್ತಿಲ್ಲದೆ ದುಡಿಯುವ ಅಮ್ಮಂದಿರಿಗಾಗಲಿ, ಹೊರಗೆ ದುಡಿದು ಬರುವ ಹೆಣ್ಣು ಮಕ್ಕಳಾಗಲೀ, ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿಗಳಾಗಲೀ ಅಷ್ಟೇ ಏಕೆ ಧಾರಾವಾಹಿ ಎಂದರೇ ಮೂಗು ಮುರಿಯುವ ಗಂಡಸರೂ ಕೂಡ ಟಿ.ಎನ್.ಸೀತಾರಾಂ ಅವರ ಧಾರಾವಾಹಿಗಳೆಂದರೆ ಟಿ.ವಿ. ಮುಂದೆ ಹಾಜರಾಗುವುದು ದಶಕಗಳ ಸತ್ಯವೆನ್ನಬಹುದು. ಪ್ರೀತಿ ಪ್ರೇಮ, ಅತ್ತೆ ಸೊಸೆ ಜಗಳ, ಆಸ್ತಿಗಾಗಿ ದ್ವೇಷ, ಒಬ್ಬ ಹೀರೋಗೆ ಇಬ್ಬರು ಹೀರೋಯಿನ್ನುಗಳು ಎನ್ನವ ಸಂಗತಿಗಳನ್ನೇ ಆವರಿಸಿಕೊಂಡು ಹೆಣ್ಣು ಮಕ್ಕಳಿಗೆ ಗೀಳತ್ತಿಸಿರುವ ಧಾರಾವಾಹಿಗಳ ನಡುವೆ ಧಾರಾವಾಹಿ ಎಂದರೆ ಗೌರವ ಮೂಡಿಸಿ, ಇದೀಗ ಮನೆಮಂದಿಯೆಲ್ಲಾ ಕೂತು ಮಗಳು ಜಾನಕಿ ಧಾರಾವಾಹಿ ನೋಡುವಂತೆ ಮಾಡಿರುವ ಸೀತಾರಾಂ ಅವರಿಗೆ ಇಂತಹ ಅಭ್ಯಾಸ ಹೊಸದೇನು ಅಲ್ಲ.

ಅಂತಹ ಸೀತಾರಾಂ ಅವರಿಗೆ ನನ್ನ ಕೆಲವು ಪ್ರಶ್ನೆಗಳು, ಅಲ್ಲಾ ಸ್ವಾಮಿ, ನೀವೇನೋ ಧಾರಾವಾಹಿಯಲ್ಲಿ ಜಾನಕಿಯನ್ನು ಕೆಎಎಸ್ ಆಫೀಸರನ್ನಾಗಿ ಮಾಡಿದಿರಿ. ಆದರೆ ಜಾನಕಿಯನ್ನು ತಮ್ಮ ಮಗಳಂತೆಯೇ ನೋಡುವ ಕರ್ನಾಟಕದ ಲಕ್ಷಾಂತರ ಮಹಿಳೆಯರ ಮನೆಯಲ್ಲಿ ಹೆಣ್ಣು ಮಕ್ಕಳಿದ್ದು, ಅವರೂ ಕೂಡ ಜಾನಕಿಯಂತೆ ಆಫೀಸರ್ ಆಗಬೇಕು ಎಂದು ಅಮ್ಮಂದಿರು ತಮ್ಮ ತಮ್ಮ ಹೆಣ್ಣು ಮಕ್ಕಳಿಗೆ ತಾಕೀತು ಮಾಡಿದ್ದಾರೆ. ಈ ರೀತಿಯ ತಾಕೀತಿನಿಂದ ನಾನೂ ಕೂಡ ಹೊರತಾಗಿಲ್ಲ. ಆಫೀಸಿನಿಂದ ಅಮ್ಮನ ಮನೆಗೆ ಹೋಗಿ ನನ್ನ ಮಗನನ್ನು ಕರೆದುಕೊಂಡು ಹೋಗುವುದು ನನ್ನ ದಿನನಿತ್ಯದ ಕೆಲಸ. ಅದೇ ರೀತಿಯಾಗಿ ಮಗನನ್ನು ಕರೆತರಲು ಸಂಜೆ ಆಫೀಸಿನಿಂದ ಅಮ್ಮನ ಮನೆಗೆ ಹೋದರೆ ಸಾಕು, ಇವತ್ತು ಮಗಳು ಜಾನಕಿ ಮಿಸ್ ಮಾಡ್ಬೇಡ, ಅಡ್ವರ್ಟೈಸ್ ನಲ್ಲಿ ಹಾಗಿದೆ, ಹೀಗಿದೆ ಎಂದು ತಲೆಗೆ ತುಂಬಿ ಕಳುಹಿಸುತ್ತಾರೆ. ಇನ್ನು 9.30 ಆಗುತ್ತಿದ್ದಂತೆ ಅದ್ಯಾಕೋ ಟಿವಿ ಮುಂದೆ ಬರಲೇ ಬೇಕು ಎನಿಸಿಬಿಡುತ್ತದೆ.

ಹೊಸ ಅಧ್ಯಾಂiiದ ಪೋಸ್ಟರ್ ನಲ್ಲಿ ನಿಮ್ಮ ಭುಜದ ಮೇಲೆ ಮಗಳು ಜಾನಕಿ ಕೈ ಇಟ್ಟು ನಿಂತರೆ, ಧಾರಾವಾಹಿ ನೋಡುವ ಹೆಣ್ಣು ಮಕ್ಕಳ ಮನಸ್ಸಿನಲ್ಲಿ ಅದೇನೋ ಸಾಧಿಸಬೇಕೆನ್ನುವ ಛಲ ಮೂಡುತ್ತದೆ. ಇವೆಲ್ಲವೂ ನಿಮ್ಮಿಂದ ಮಾತ್ರ ಸಾಧ್ಯವಾಗುತ್ತದಲ್ಲಾ ಅದೇಗೆ? ಅರ್ಧ ಘಂಟೆ ಮುಗಿಯುವುದೇ ಗೊತ್ತಾಗೋದಿಲ್ಲ. ನಮ್ಮ ಅಮೂಲ್ಯವಾದ ೩೦ ನಿಮಿಷದಲ್ಲಿ ಮನಸ್ಸಿನಲ್ಲಿ ಸಾವಿರ ಆಸೆಗಳನ್ನು ಹುಟ್ಟಿಸಿಬಿಡುತ್ತೀರಲ್ಲಾ ಇದು ನ್ಯಾಯವಾ? ನಿಮ್ಮ ಧಾರಾವಾಹಿಯನ್ನು ಲಕ್ಷ ಮಂದಿ ನೋಡುತ್ತಾರೆ. ನಿಮ್ಮ ಧಾರಾವಾಹಿಯಿಂದ ಸ್ಫೂರ್ತಿಗೊಂಡು, ಅಮ್ಮನ ಕಾಟ ತಾಳಲಾರದೆ ಎಲ್ಲರೂ ಕೆಎಎಸ್ ಅಧಿಕಾರಿಯಾದರೆ ನಮ್ಮ ಸರ್ಕಾರದ ಪಾಡೇನು? ಹೆಣ್ಣು ಮಕ್ಕಳಿಲ್ಲದೆ ಇರುವ ಗಂಡು ಮಕ್ಕಳ ಅಮ್ಮಂದಿರು, ನಮಗೆ ಜಾನಕಿಯೇ ಸೊಸೆಯಾಗಬೇಕು ಎಂದರೆ ಮುಂದಾಗುವ ಅನಾಹುತಕ್ಕೆ ನೀವು ಹೊಣೆಯಾಗುವಿರಾ?

ಅದಿರಲಿ, ಇನ್ನು ಗಂಡಸರ ವಿಷಯಕ್ಕೆ ಬಂದರೆ, ಧಾರಾವಾಹಿ ಯಾಕೆ ನೋಡ್ತೀಯಾ ಎನ್ನವ ಧ್ವನಿಯನ್ನೇ ಇಲ್ಲವಾಗಿಸಿ, ಅವರೂ ಕೂಡ ತೆಪ್ಪಗೆ ಬಂದು ಜಾಹೀರಾತನ್ನೂ ಬಿಡದಂತೆ ಮಗಳು ಜಾನಕಿಯನ್ನು ನೋಡುವಂತೆ ಮಾಡಿ ಬಿಡುತ್ತೀರಲ್ಲಾ, ಗಂಡಸರ ಶಾಪ ನಿಮಗೆ ತಟ್ಟುವುದಿಲ್ಲವಾ? ಅಥವಾ ಕೋಟ್ಯಾನು ಕೋಟಿ ಹೆಂಗಸರ ಆಶೀರ್ವಾದ ನಿಮ್ಮ ಮೇಲಿದೆಯಾ?

ಅದೇನೇ ಆಗಲಿ ಸ್ವಾಮಿ ಇದೀಗ ನಿಮ್ಮ ಕೋರ್ಟ್ ಕಲಾಪಗಳಿಗಾಗಿ ಇಡೀ ಕರುನಾಡೇ ಕಾತುರದಿಂದ ಕಾಯುತ್ತಿದೆ. ಅದರಲ್ಲಿ ನಾನೂ ಒಬ್ಬಳು. ನಿಮ್ಮ ಧಾರಾವಾಹಿಗಳ ಪಾತ್ರಧಾರಿಗಳು ನಿಜ ಜೀವನದಲ್ಲಿ ನಟರಿರಬಹುದು. ಆದರೆ ಕನ್ನಡಿಗರ ಮನಸ್ಸಿನಲ್ಲಿ ಅವರೆಲ್ಲರೂ ನಿಜವಾಗಿಯೂ ಅದೇ ಪಾತ್ರದಲ್ಲಿ ಗೋಚರಿಸುತ್ತಾರೆ. ಐಎಎಸ್ ಆಫೀಸರ್ ಆಗಿ ಕಾಣಿಸಿಕೊಳ್ಳುವ ಆನಂದ್ ಬೆಳಗೂರು ಆಗಿರಬಹುದು, ಜೀವನದಲ್ಲಿ ನೆಲೆಯೂರಲು ಹೋರಾಡುತ್ತಿರುವ ನಿರಂಜನ್ ಆಗಿರಬಹುದು, ಭಾರ್ಗಿ ಅವರಾಗಿರಬಹುದು ಮಿಕ್ಕ ಎಲ್ಲಾ ಪಾತ್ರಗಳೂ ಅಷ್ಟೇ, ಎಲ್ಲರೂ ಅಕಸ್ಮಾತ್ ನಮ್ಮಗಳ ಮುಂದೆ ಬಂದರೆ ಅವರನ್ನು ಅದೇ ಪಾತ್ರಗಳಲ್ಲಿ ಕಾಣುವಂತೆ ಮಾಡಿದ್ದೀರಿ..

ಅವರೆಲ್ಲರನ್ನು ಬೇರೆ ಪಾತ್ರಗಳಲ್ಲಿ ನೋಡಲು ಸಾಧ್ಯವೇ ಇಲ್ಲ ಎನ್ನವಂತೆ ಮಾಡಿದ್ದೀರಲ್ಲಾ, ಇದು ನ್ಯಾಯವಾ? ಅದಿರಲಿ ಮುಖ್ಯವಾಗಿ, ಶ್ಯಾಮಲಾ ಅವರನ್ನು ಶಾಮಲತ್ತೆ ಎಂದೇ ಹೇಳಬೇಕೆನಿಸುತ್ತದೆ. ನನಗಷ್ಟೇ ಅಲ್ಲಾ, ನಿಮ್ಮ ಧಾರಾವಾಹಿ ನೋಡುವ ಎಲ್ಲರಿಗೂ ಕೂಡ.. ಅಲ್ಲಾ ಸ್ವಾಮಿ ಅದೆಷ್ಟು ಲಕ್ಷ ಮಂದಿಗೆ ಶಾಮಲಾ ಅವರನ್ನು ಅತ್ತೆಯನ್ನಾಗಿ ಮಾಡಿದ್ದೀರಿ? ಪಾತ್ರಗಳಿಗೆ ಸರಿಯಾದ ಕಲಾವಿದರನ್ನು ನೀವು ಆಯ್ಕೆ ಮಾಡುತ್ತೀರೋ? ಅಥವಾ ನಿಮ್ಮ ಧಾರಾವಾಹಿಯಲ್ಲಿ ನಟಿಸಿದ ಮೇಲೆ ಆ ಕಲಾವಿದರು ಹಾಗೆ ಎಲ್ಲರ ಮನಸ್ಸಿನಲ್ಲಿ ಮನೆ ಮಾಡಿಬಿಡುತ್ತಾರೋ ನಮಗಂತೂ ತಿಳಿಯದು.

ಹೀಗೆ ಯಾರೋ ಒಬ್ಬರು ಮಾತನಾಡುವಾಗ ಹೇಳಿದರು.. ಬಾಲಕಿಯರ ಶಾಲೆಯಲ್ಲಿ ಶಿಕ್ಷಕಿಯೊಬ್ಬರು, ವಿದ್ಯಾರ್ಥಿನಿಯರಿಗೆ ಧಾರಾವಾಹಿ ನೋಡೋದು ಕಡಿಮೆ ಮಾಡಿ, ಓದಿನ ಕಡೆ ಗಮನ ಕೊಡಿ ಎಂದು, ನಂತರದಲ್ಲಿ ಆಫೀಸ್ ರೂಮಿನಲ್ಲಿ ಕೂತು ಸಹ ಶಿಕ್ಷಕಿಯರೊಂದಿಗೆ ರೀ, ಜಾನಕಿ ಎಷ್ಟು ಚೆನ್ನಾಗಿ ಬುಲೆಟ್ ಓಡಿಸುತ್ತಾಳೆ, ಅವಳನ್ನು ನೋಡಿದ್ರೆ ನನಗೂ ಬುಲೆಟ್ ಓಡಿಸಬೇಕು ಅನ್ಸತ್ತೆ ಎನ್ನತ್ತಿದ್ದರಂತೆ. ಈಗ ಆ ಶಿಕ್ಷಕಿಯ ಪತಿಯ ಪಾಡೇನು? ಬುಲೆಟ್ ಕೊಡಿಸುವುದು, ಕಲಿಸುವುದಾದರೂ ಹೇಗೆ?
ತಮಾಷೆಯನ್ನು ಹೊರತುಪಡಿಸಿ ಹೇಳಬೇಕೆಂದರೆ ನಿಜಕ್ಕೂ ನಿಮಗೊಂದು ಹ್ಯಾಟ್ಸ್ ಆಫ್ ಸರ್, ಮನರಂಜನೆಗಾಗಿ ನೋಡುವ ಧಾರಾವಾಹಿಗಳಲ್ಲಿ ಸ್ಫೂರ್ತಿಯ ಬುತ್ತಿಯನ್ನು ಹೊತ್ತುತಂದು, ಸರಿಯಾಗಿ ರಾತ್ರಿ ಊಟದ ಸಮಯದಲ್ಲಿ ಉಣಬಡಿಸುವ ನಿಮಗೆ ಹಾಗೂ ನಿಮ್ಮ ಸಂಪೂರ್ಣ ತಂಡಕ್ಕೆ ನಮ್ಮದೊಂದು ಧನ್ಯವಾದಗಳು. ಸದ್ಯಕ್ಕೆ ಕೋರ್ಟ್ ಕಲಾಪದ ವೀಕ್ಷಣೆಯ ಕಾತುರದಲ್ಲಿರುವ ಎಲ್ಲಾ ಕನ್ನಡಿಗರ ಕಡೆಯಿಂದ ಮಗಳು ಜಾನಕಿಗೆ ಶುಭವಾಗಲಿ ಎಂಬ ಹಾರೈಕೆ….

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ