ನಮಸ್ಕಾರ ಸ್ನೇಹಿತರೆ, ರಮ್ಯ ಜಗತ್, ಮೈಸೂರು.. ಸಾಮಾಜಿಕ ಜಾಲತಾಣದಲ್ಲಿ ದಿನ ನಿತ್ಯ ನಾವುಗಳು ನೂರಾರು ಜನರನ್ನ ನೋಡ್ತೀವಿ. ಆದರೆ ಕೆಲವರು ವಿಚಿತ್ರ ಎನಿಸ್ತಾರೆ, ಕೆಲವರ ವಿಚಿತ್ರವಾದ ವೀಡಿಯೋಗಳು ಗಮನ ಸೆಳಿತಾವೆ..
ಆದರೆ ಇಲ್ಲೊಬ್ಬ ಪುಣ್ಯಾತ್ಮ ಇದ್ದಾರೆ ನೋಡಿ, ಈತನ ಹೆಸರು ಸೂರಿ ಅಂತ, ಆದರೆ ಪಾವಗಡ ಸೂರಿ ಎಂದೇ ಬಹಳಷ್ಟು ಜನರಿಗೆ ಗೊತ್ತಿದೆ.. ಈ ವ್ಯಕ್ತಿ ನೋಡೋಕೆ ಗಾಳಿ ಬಂದರೆ ತೂರಿ ಹೋಗೋ ತರ ಇದ್ದಾರೆ ಎನಿಸಬಹುದು.. ಆದರೆ ನಿಜಕ್ಕೂಇವರ ವ್ಯಕ್ತಿತ್ವ ಬಹಳ ತೂಕವಾದದ್ದು..

ಈ ಮನುಷ್ಯನ ಬಗ್ಗೆ ಒಂದಷ್ಟು ಸಾಲುಗಳನ್ನ ನಾನು ಬರೆಯೋಕೆ ಒಂದು ಕಾರಣವಿದೆ.. ಈತ ಇರೋದು ನಮ್ಮದೇ ಮೈಸೂರಿನಲ್ಲಿ.. ಮೈಸೂರನ್ನು ನಮ್ಮೂರು ಎಂದೇಳಲು ನನಗೆ ಬಹಳ ಹೆಮ್ಮೆ ಇದೆ.. ಅದಕ್ಕಾಗಿಯೇ ನಮ್ಮೂರಿನಲ್ಲಿ ಇವರು ಇದ್ದಾರೆ ಎಂದು ಬಹಳ ಜೋರಾಗಿಯೇ ನಾನು ಹೇಳುತ್ತಿದ್ದೇನೆ.. ಆದರೆ ಇವರಿಂದ ನಾನು ಮಾತ್ರವಲ್ಲ ಎಲ್ಲರೂ ಕಲಿಯುವುದು ಬಹಳಷ್ಟು ಇದೆ. ಮೊದಲೇ ಹೇಳಿದಂತೆ ಇವರ ಹುಟ್ಟೂರು ಪಾವಗಡ.. ಇವರ ಹುಟ್ಟೂರಿನ ಬಗ್ಗೆ ಇವರಿಗಿರುವ ಅಭಿಮಾನ ನಿಜಕ್ಕೂ ಅಭಿನಂದನಾರ್ಹ.. ಕೇವಲ ಊರಿನ ಮೇಲೆ ಅಭಿಮಾನ ವಿದ್ದರೆ ಮಾತ್ರ ಸಾಲದು.. ಜವಾಬ್ದಾರಿಯೂ ಇರಬೇಕು ಎಂಬುದನ್ನ ಇವರನ್ನ ನೋಡಿ ತಿಳಿಯಬಹುದು.. ಪಾವಗಡ ಅನ್ನೋ ಊರು ಬಹಳಷ್ಟು ಸಮಸ್ಯೆಗಳನ್ನ ಎದುರಿಸುತ್ತಿದೆ. ಫ್ಲೋರೈಡ್‌ಯುಕ್ತ ನೀರನ್ನು ಕುಡಿದು ಜನರು ರೋಗಗಳಿಗೆ ತುತ್ತಾಗಿ ಆಸ್ಪತ್ರೆ ಹಾದಿ ಹಿಡಿಯುತ್ತಿರುವುದು, ಬರದ ನಡುವೆ ಪಾವಗಡದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಮಟ್ಕಾ ದಂದೆ ಇರಬಹುದು.. ಕುಡಿಯುವ ಹನಿ ನೀರಿಗೂ ತತ್ತರಿಸಿ ಹೋಗಿರುವ ಪಾವಗಡ ಜನರ ಸಮಸ್ಯೆಗಳು ಹೇಳುತ್ತಿದ್ದರೆ ನಾನು ಇಲ್ಲಿ ಹೇಳಲು ಬಂದಿರುವ ವಿಷಯವೇ ಮರೆತುಹೋಗುತ್ತದೆ.. ಸದ್ಯಕ್ಕೆ ಅಷ್ಟು ಸಾಕು..

ಈ ವ್ಯಕ್ತಿ ಅಂದರೆ ಈ ಪಾವಗಡ ಸೂರಿ ಅವರು ಇರೋದು ರೈಲ್ವೇ ಉದ್ಯೋಗದಲ್ಲಿ.. ನೆಮ್ಮದಿಯಾಗಿ ತನ್ನ ಜೀವನವನ್ನ ತಾನು ನೋಡಿಕೊಂಡು ತನ್ನ ಪಾಡಿಗೆ ತಾನು ನೆಮ್ಮದಿಯ ಬದುಕನ್ನ ಕಾಣಬಹುದು.. ಆದರೆ ಮೈಸೂರಿನಲ್ಲಿ ಉದ್ಯೋಗದಲ್ಲಿದ್ದರೂ ಸದಾ ತನ್ನೂರಿನ ಸಮಸ್ಯೆಗಳ ಬಗ್ಗೆ ತನ್ನೂರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅರಿವು ಮೂಡಿಸಿ ಸರ್ಕಾರಕ್ಕೆ ತಲುಪಿಸಲು ಪ್ರಯತ್ನ ಪಡುತ್ತಲೇ ಇರುತ್ತಾರೆ.. ಇಷ್ಟಕ್ಕೇ ಸುಮ್ಮನಾಗದ ಈ ವ್ಯಕ್ತಿ ತನ್ನಂತೆ ಒಂದಿಷ್ಟು ಜನರ ಜೊತೆಗೂಡಿ ತನ್ನೂರಿನ ಸರ್ಕಾರಿ ಶಾಲೆಗಳಿಗೆ ಪುಸ್ತಕಗಳನ್ನು ಹಾಗೂ ಸಣ್ಣಪುಟ್ಟ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು.. ಹೀಗೆ ಇನ್ನಿತರ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಯಾರಿಗೂ ತಿಳಿಯದಂತೆ ಮಾಡುತ್ತಲೇ ಇರುತ್ತಾರೆ..

ಇವರು ಒಮ್ಮೆ ನನಗೆ ಖರೆ ಮಾಡಿ, ನಮ್ಮ ಪಾವಗಡದಲ್ಲಿ ನೀರಿನ ಸಮಸ್ಯೆ ಬಹಳಷ್ಟಿದೆ ಒಂದು ಆರ್ಟಿಕಲ್ ಮಾಡಿ ಮೇಡಂ ಎಂದು ಬಹಳ ವಿನಯದಿಂದ ಕೇಳಿಕೊಂಡಿದ್ದರು.. ಕೆಲಸದ ಒತ್ತಡವಿದ್ದ ನಾನು ಒಂದಷ್ಟು ದಿನಗಳ ನಂತರ ಪಾವಗಡದ ನೀರಿನ ಸಮಸ್ಯೆ ಮಟ್ಕಾ ಸಮಸ್ಯೆಗಳ ಬಗ್ಗೆ ಬರೆದೂ ಇದ್ದೆ.. ಇದೀಗ ಇದೇ ವ್ಯಕ್ತಿಯ ಬಗ್ಗೆ ಬರೆಯುತ್ತಿರೋದು ವಿಶೇಷ.. ಅಂದಹಾಗೆ ಈ ವ್ಯಕ್ತಿಯ ಬಗ್ಗೆ ತಿಳಿದಿರುವವರು ಒಂದು ಪುಸ್ತಕ ಸಮಾರಂಭದಲ್ಲಿ ಸನ್ಮಾನ ಮಾಡುವ ಸಲುವಾಗಿ ಕರೆಯುತ್ತಾರೆ. ಆದರೆ ಈ ಒಂದೇ ಮಾತಿನಲ್ಲಿ ಬರೋದಿಲ್ಲ ಎನ್ನುತ್ತಾರೆ.. ಅಹಂಕಾರವೆಂದುಕೊಳ್ಳಬೇಡಿ.. ಸನ್ಮಾನ ಮಾಡಿಸಿಕೊಳ್ಳುವಷ್ಟು ನಾನೇನು ದೊಡ್ಡವನಲ್ಲ.. ಹಾಗೂ ಏನನ್ನೂ ಸಾಧಿಸಿಲ್ಲ ಎನ್ನುತ್ತಾರೆ.. ಅಷ್ಟೇ ಅಲ್ಲದೆ ದೇಶದ ವಿಚಾರವಾಗಲಿ, ಸೈನ್ಯದ ವಿಚಾರವಾಗಲಿ ಬಂದರೆ ತನ್ನದೆ ರೀತಿಯಲ್ಲಿ ಪೋಸ್ಟ್‌ಗಳನ್ನು ಹಾಕುತ್ತಾ ಅಭಿಮಾನ ತೊರುತ್ತಾರೆ..

ಈ ಸಮಯದಲ್ಲಿ ಯಾಕೆ ಇವರ ಬಗ್ಗೆ ಬರೆದಿದ್ದೇನೆ ಎಂದರೆ ಈ ರೀತಿ ತನ್ನೂರಿಗಾಗಿ ಏನಾದರೂ ಮಾಡಬೇಕೆಂದುಕೊಂಡಿರುವ, ಮಾಡುತ್ತಿರುವ ವ್ಯಕ್ತಿಗಳು ಬಹಳಷ್ಟು ಜನರಿದ್ದಾರೆ.. ಅಂತಹವರಿಗೆಲ್ಲಾ ನಮ್ಮ ಕಡೆಯಿಂದ ಒಂದು ಹ್ಯಾಟ್ಸ್ ಆಫ್.. ತಾನಾಯ್ತು ತನ್ನ ಕೆಲಸವಾಯ್ತು ಎಂದಿರುವ ನನ್ನಂತ ಅದೆಷ್ಟೋ ಜನರಿಗೆ ನಮ್ಮ ನಮ್ಮ ಹುಟ್ಟೂರಿಗೆ ನಮ್ಮ ಶಕ್ತಿಯಾನುಸಾರ ಅಭಿವೃದ್ಧಿ ಮಾಡಲು ನಿಮ್ಮಂತವರು ನಿಜಕ್ಕೂ ಸ್ಫೂರ್ತಿ.. ನಿಮ್ಮ ಊರಿನ ಸಮಸ್ಯೆಗಳು ಆದಷ್ಟು ಬೇಗ ಬಗೆಹರಿಯಲಿ..
ಈ ರೀತಿ ವಿಶೇಷ ವ್ಯಕ್ತಿಗಳು ನಿಮಗೂ ಗೊತ್ತಿದ್ದರೆ, Ramya jagath ಅನ್ನೋ ಪೇಸ್‌ಬುಕ್ ಪೇಜ್‌ಗೆ ಮೆಸೆಜ್ ಮೂಲಕ ತಿಳಿಸಿ.. ಅವರ ಬಗ್ಗೆಯೂ ಲೇಖನ ಬರೆದು ಧನ್ಯವಾದ ತಿಳಿಸೋಣ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ