ಮನೆಯಲ್ಲಿದ್ದ ಕಂಚಿನ ಪಾತ್ರೆಗಳನ್ನು ಅಡವಿಟ್ಟು ಮೆಟ್ರಿಕ್ಯುಲೇಷನ್ ಪರೀಕ್ಷಾಶುಲ್ಕ ಕಟ್ಟುವ ವಿಶ್ವೇಶ್ವರಯ್ಯನವರು, ಬಡತನದ ಬವಣೆಯಲ್ಲಿ ಬೆಂದು ಅಪರಂಜಿಯಾದವರು. ಮುಂದೆ ಮೈಸೂರು ಸಂಸ್ಥಾನವು ನೀಡಿದ ವಿದ್ಯಾರ್ಥಿ ವೇತನದ ನೆರವಿನಿಂದ ಪೂನಾದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪೂರೈಸುತ್ತಾರೆ.
೧೮೮೪ ರಲ್ಲಿ ಬಾಂಬೆಯಲ್ಲಿ ಲೋಕೋಪಯೋಗಿ ಇಂಜಿನಿಯರ್ ಆಗಿ ನೇಮಕವಾಗುವ ಸರ್ ಎಂ ವಿ ಯವರು ಖಾನ್‌ದೇಶ ಮತ್ತು ನಾಸಿಕ್ ಜಿಲ್ಲೆಗಳಲ್ಲಿ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಪಂಜ್ರಾನದಿಗೆ ತೂಬು ಮೇಲ್ಗಾಲುವೆಯನ್ನು ನಿರ್ಮಿಸುತ್ತಾರೆ. ಸಿಂಧ್ ಪ್ರಾಂತ್ಯದ ಸುಕ್ಕೂರು ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆಯನ್ನು ಯಶಸ್ವಿಯಾಗಿ ಪೂರೈಸುತ್ತಾರೆ. ಪೂನಾದಲ್ಲಿ ಸರದಿಯಲ್ಲಿ ಬೆಳೆಗಳನ್ನು ಬೆಳೆಯುವ ತಾಕು ನೀರಾವರಿ ಪದ್ದತಿಯನ್ನು ಜಾರಿಗೊಳಿಸುವ ಮೂಲಕ ರೈತರ ಸಂಕಷ್ಟಕ್ಕೆ ಪರಿಹಾರ ದೊರಕಿಸುತ್ತಾರೆ..

ಕಾರ್ಯಕ್ಷಮತೆ ಮತ್ತು ಪರಿಶ್ರ್ರಮದ ಪ್ರತೀಕವಾಗಿದ್ದ ಸರ್ ಎಂವಿಯವರು ಬ್ರಿಟಿಷ್ ಅಧಿಕಾರಿಗಳ ಅಪಾರ ಮೆಚ್ಚುಗೆಗೂ ಪಾತ್ರರಾಗಿದ್ದರು. ಹೀಗಾಗಿಯೇ ಅವರಿಗಿಂತ ೧೮ ಮಂದಿ ಐರೋಪ್ಯ ಹಾಗೂ ಭಾರತೀಯ ಹಿರಿಯ ಎಂಜಿನಿಯರ್‌ಗಳಿದ್ದರೂ ಮುಂಬೈ ಪ್ರಾಂತ್ಯದ ಸ್ಯಾನಿಟರಿ ಎಂಜಿನಿಯರ್ ಆಗಿ ನೇಮಕವಾಗುತ್ತಾರೆ. ಆ ಹುದ್ದೆ ಪಡೆದ ಪ್ರಥಮ ಭಾರತೀಯರಿವರು. ಹೈದ್ರಾಬಾದ್‌ನ ಈಸಿ ಮತ್ತು ಮೂಸಿ ನದಿಗಳಿಗೆ ಜಲಾಶಯಗಳನ್ನು ನಿರ್ಮಾಣ ಮಾಡುವ ಮೂಲಕ ಪ್ರವಾಹಕ್ಕೆ ತುತ್ತಾಗುತ್ತಿದ್ದ ಹೈದ್ರಾಬಾದ್‌ಗೆ ಶಾಶ್ವತ ಪರಿಹಾರ ನೀಡುತ್ತಾರೆ. ವ್ಯವಸ್ಥಿತ ನಗರ ನಿರ್ಮಾಣ ಯೋಜನೆಯನ್ನೂ ಅನುಷ್ಠಾನಗೊಳಿಸುತ್ತಾರೆ.
ಪೂನಾದ ಪೀಪ್, ಗ್ವಾಲಿಯಾರ್‌ನ ತಿಗ್ರಾ ಹಾಗು ಕೆಆರ್‌ಎಸ್ ಜಲಾಶಯಗಳಿಗೆ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸುವ ಮೂಲಕ ಜಲಾಶಯಗಳಿಗೆ ಅನಿರೀಕ್ಷಿತವಾಗಿ ಬರಬಹುದಾದ ಅಪಾಯಗಳಿಂದ ಪಾರುಮಾಡಿದರು. ಸೂಕ್ಷ್ಮಮತಿಗಳಾಗಿ, ಅತಿ ಬುದ್ಧಿವಂತಿಕೆಯ ಮಾತುಗಳನ್ನಾಡುವವರನ್ನು ನೀನೇನು ವಿಶ್ವೇಶ್ವರಯ್ಯನಾ ? ! ಎಂದು ಈಗಲೂ ಜನ ಪರಸ್ಪರ ಛೇಡಿಸುವುದುಂಟು ! ನಿಷ್ಪಕ್ಷಪಾತಿ, ಕುಶಲಮತಿ, ಕ್ರಿಯಾಶೀಲ ಹಾಗೂ ಶಿಸ್ತಿನ ಸಿಪಾಯಿಯಾಗಿದ್ದ ಸರ್‌ಎಂ.ವಿಯವರನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿನ ದಿವಾನರನ್ನಾಗಿ ನೇಮಿಸಿಕೊಳ್ಳುವ ಸಂದರ್ಭದಲ್ಲಿ ನೀನು ನಮ್ಮ ಹತ್ತಿರದ ಸಂಬಂಧಿಗಳಿಗೆ ಕೆಲಸ ಕೊಡಿಸುವಂತೆ ನನಗೆ ಶಿಫಾರಸ್ಸು ಮಾಡುವುದಿಲ್ಲವೆಂದು ಭರವಸೆ ನೀಡಿದರೆ ಮಾತ್ರ ನಾನು ಆ ಹುದ್ದೆಗೆ ಒಪ್ಪಿಕೊಳ್ಳುತ್ತೇನೆ ಎಂದು ತಮ್ಮ ತಾಯಿಯವರಿಗೇ ಷರತ್ತು ಹಾಕಿದರಂತೆ ! . ಅವರ ಆಡಳಿತಾವಧಿಯಲ್ಲಿ ಮೈಸೂರಿನ ಹೊಸ ಅರಮನೆ, ಪುರಭವನ, ಕೆ.ಆರ್. ಆಸ್ಪತ್ರೆ, ಕೃಷ್ಣರಾಜಸಾಗರ, ಮೈಸೂರು ವಿವಿ, ಮೈಸೂರು ಬ್ಯಾಂಕ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದವು.


ಕೈಗಾರಿಕೀಕರಣ ಇಲ್ಲವೆ ಅವನತಿ ಎಂದು ಘೋಷಿಸಿದ ಅವರು ವ್ಯವಸಾಯ ಮತ್ತಿತರ ಗ್ರಾಮೀಣ ಚಟುವಟಿಕೆಗಳ ಅಭಿವೃದ್ಧಿಯನ್ನು ಕಡೆಗಣಿಸಲಿಲ್ಲ. ಅಂತೆಯೇ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೂಳೆ ಮತ್ತು ಗೊಬ್ಬರ ತಯಾರಿಕಾ ಸ್ಥಾವರ, ಸಕ್ಕರೆ ಕಾರ್ಖಾನೆ, ಔಷಧಿ ತಯಾರಿಕಾ ಘಟಕ, ಗಂಧದ ಎಣ್ಣೆ, ಹೀಗೆ ನೂರಾರು ಕಾರ್ಖಾನೆಗಳು, ಘಟಕಗಳು ಅವರ ಅಧಿಕಾರಾವಧಿಯಲ್ಲಿ ಸದ್ದು ಸುದ್ದಿ ಮಾಡಲಾರಂಭಿಸಿದವು. ರಾಜ್ಯದಲ್ಲಿ ಹೊಸ ಹೊಸ ರೈಲು ಮಾರ್ಗಗಳು ತೆರೆದುಕೊಂಡವು. ಶಿಕ್ಷಣ, ನೀರಾವರಿ, ಆರೋಗ್ಯ, ಸಹಕಾರ ಇವೇ ಮೊದಲಾದ ಕ್ಷೇತ್ರಗಳಿಗೂ ಆದ್ಯತೆ ನೀಡಿದರು.
ದಿನಂಪ್ರತಿ ೧೫ ಗಂಟೆಗಳಿಗೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಸರ್ಕಾರಿ ಕೆಲಸ ಮಾಡುವಾಗ ಸರ್ಕಾರದ ಮೇಣದ ಬತ್ತಿ ಬಳಸಿದರೆ, ಸ್ವಂತ ಕೆಲಸ ಮಾಡುವಾಗ ಸ್ವಂತ ಮೇಣದ ಬತ್ತಿ ಬಳಸುತ್ತಿದ್ದರು. ಅವರು ಹುಟ್ಟಿದ ದಿನವಾದ ಇಂದು ಎಂಜಿನಿಯರ್‍ಸ್ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ತರಬೇತಿ ಮತ್ತು ಜ್ಞಾನಪಡೆಯುವಲ್ಲಿ ನಮ್ಮ ಎಂಜಿನಿಯರ್‌ಗಳು ಯಾವುದೇ ದೇಶದವರಿಗಿಂತ ಕಡಿಮೆಯಿರಬಾರದು ಎಂದು ಹೇಳುತ್ತಿದ್ದ ಅವರು ಸ್ವಂತ ಖರ್ಚಿನಲ್ಲಿ ವಿದೇಶಗಳ ಅಧ್ಯಯನ ಪ್ರವಾಸ ಮಾಡುತ್ತಾರೆ.
ನಾಡಜನರು, ಬ್ರಿಟಿಷ್ ಅಧಿಕಾರಿಗಳು ಹಾಗೂ ಮೈಸೂರು ಅರಸರಿಂದ ಏಕಪ್ರಕಾರವಾಗಿ ಮೆಚ್ಚುಗೆ ಪಡೆದಿದ್ದ ಸರ್‌ಎಂ.ವಿ., ಸ್ವಯಂ ವಸ್ತ್ರಸಂಹಿತೆ ರೂಢಿಸಿಕೊಂಡಿದ್ದರು. ಸದಾ ಸೂಟು ಬೂಟು ತಲೆಯ ಮೇಲೆ ಮೈಸೂರು ಪೇಟಧಾರಿಯಾಗಿರುತ್ತಿದ್ದರು.! ರಾಷ್ಟ್ರಕವಿ ಕುವೆಂಪು ಅವರು ಯಂತ್ರರ್ಷಿ ಎಂದೇ ಬಣ್ಣಿಸಿದ್ದಾರೆ. ಸರ್‌ಎಂ.ವಿ.ಯವರ ಕಛೇರಿಯೆಂದರೆ ಅದು ಶಿಸ್ತಿನ ಆಗರ ಎನ್ನುತ್ತಾರೆ ಮಾಸ್ತಿಯವರು. ಡಿವಿಜಿ, ಕೆಂಗಲ್ ಹನುಮಂತ್ಯಕಡಿದಾಳ್ ಮಂಜಪ್ಪ, ಮೊದಲ್ಗೊಂಡು ಅನೇಕ ರಾಷ್ಟ್ರೀಯ ನಾಯಕರೊಂದಿಗೆ ಸಾಕಷ್ಟು ಒಡನಾಟವಿರಿಸಿಕೊಂಡಿದ್ದರು.


ಮಹಾತ್ಮ ಗಾಂಧಿಯವರೊಡನೆ ಪತ್ರಗಳ ಮೂಲಕ ಸಾಕಷ್ಟು ವಿಚಾರ ವಿನಿಮಯ ಮಾಡಿದ ಅವರು ಅವರ ಕೋರಿಕೆಯಂತೆ ಒರಿಸ್ಸಾದ ಪ್ರವಾಹ ಸಮಸ್ಯೆಗೆ ಪರಿಹಾರ ಸೂಚಿಸುತ್ತಾರೆ ಆದರೆ ಯಾವುದೇ ಸಂಭಾವನೆ ಪಡೆಯುವುದಿಲ್ಲ . ಬ್ರಿಟಿಷ್ ವೈಸರಾಯ್‌ಯವರು ಸರ್ ಪದವಿ ನೀಡಿದರೆ, ಭಾರತ ಸರ್ಕಾರವು ೧೯೫೫ ರಲ್ಲಿ ಭಾರತ ರತ್ನ ನೀಡಿತು. ಅನೇಕ ವಿವಿಗಳು ಗೌರವ ಡಾಕ್ಟರೇಟ್ ಪದವಿ-ಪುರಸ್ಕಾರಗಳನ್ನು ನೀಡಿವೆ. ಮೆಮ್ಯಾರ್‍ಸ್ ಆಫ್ ಮೈ ವರ್ಕಿಂಗ್ ಲೈಫ್ ಎಂಬುದು ಸರ್‌ಎಂವಿಯವರ ಆತ್ಮಚರಿತ್ರೆ. ಬದುಕಿರುವಾಗಲೇ ದಂತಕತೆಯಾಗಿದ್ದ ಶತಾಯುಷಿ ಸರ್‌ಎಂ.ವಿಯವರು ೧೯೬೨ ಏಪ್ರಿಲ್ ೧೪ ರಂದು ನಿಧನರಾದರು. ಅವರ ಶಿಸ್ತಿನ ಜೀವನ, ದೇಶಭಕ್ತಿ, ನಿಸ್ವಾರ್ಥ ಬದುಕು ಇಂದಿನ ಯುವಪೀಳಿಗೆಗೆ ಮಾದರಿಯಾಗಬೇಕಾಗಿದೆ.

Leave comment

Your email address will not be published. Required fields are marked with *.

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ