ಜನರು ತಮ್ಮ ಕಷ್ಟಗಳನ್ನು ಕ್ಷೇತ್ರದ ಶಾಸಕರು ಹಾಗು ಸಂಸದರಿಗೆ ಹೇಳೋದು ಸಾಮಾನ್ಯ. ಆದರೆ ಮಂಡ್ಯದಲ್ಲಿ ಡಿಸಿ ತಮ್ಮಣ್ಣ ಅವರ ಬಳಿ ಹೋಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡ ಜನರಿಗೆ ನಾಚಿಕೆ ಆಗಲ್ವಾ ಎಂದು ಅವಮಾನ ಮಾಡಿ ಕಳುಹಿಸಿದ್ದು, ಇದೀಗ ಎಲ್ಲರ ಟೀಕೆಗೆ ಕಾರಣವಾಗಿದೆ.

ಹೌದು ಮದ್ದೂರಿನ ಜನರು ಮದ್ದೂರಮ್ಮನ ಕೆರೆಯಂಗಳದಲ್ಲಿ ನಡೆದ ಕುಡಿಯುವ ನೀರಿನ ಕಾಮಗಾರಿಯ ಶಂಕುಸ್ಥಾಪನೆ ವೇಳೆ ದಲಿತ ಕಾಲೋನಿಗೆ ಚರಂಡಿ ಮತ್ತು ಸಮರ್ಪಕ ರಸ್ತೆ ನಿರ್ಮಿಸುವಂತೆ ಸಚಿವ ಡಿಸಿ ತಮ್ಮಣ್ಣ ಅವರ ಬಳಿ ಮನವಿ ಮಾಡಿಕೊಂಡರು.

ಆದರೆ ಮನವಿ ಮಾಡಿದ ಜನರನ್ನು ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಟ್ಟಿಗೆದ್ದ ಸಚಿವ ತಮ್ಮಣ್ಣ ಅವರು ಅಭಿವೃದ್ಧಿಗೆ ನಾವು ಬೇಕು, ವೋಟ್ ನೀಡಲು ಅವರು ಬೇಕಾ? ಎಂದು ಮಣೆಗಾರಿಕೆ ಮಾಡಲು ಬರುತ್ತಾರೆ ಎಂದಿದ್ದಾರೆ. ಅಷ್ಟೇ ಅಲ್ಲದೆ ಅಭಿವೃದ್ದಿ ಕೆಲಸಕ್ಕಾಗಿ ನಮ್ಮನ್ನು ಕೇಳುವುದಕ್ಕೆ ನಾಚಿಕೆ ಆಗಲ್ವಾ ಎಂದು ಡಿಸಿ ತಮ್ಮಣ್ಣ ಅವರು ಕಿಡಿಕಾರಿದ್ದಾರೆ.

ಇದೀಗ ಈ ಕುರಿತು ಪ್ರತಿಕ್ರಿಯಿಸಿರುವ ಮಂಡ್ಯ ಸಂಸದೆ ಸುಮಲತಾ ಅವರು ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ಕೊಡಲಿ ಎಂದು ಖಡಕ್ ಆಗಿಯೇ ಗುಡುಗಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಬೇಜಾರಾಗಿದ್ರೆ ರಾಜೀನಾಮೆ ಕೊಡಿ.. ಜನರ ಕೆಲಸ ಮಾಡಲ್ಲ ಅಂತ ಯಾಕೆ ಹೇಳ್ತೀರಾ.. ಜೆಡಿಎಸ್ ಸೋಲಿಗೆ ಡಿ.ಸಿ ತಮ್ಮಣ್ಣ ಹಾಗೂ ಜೆಡಿಎಸ್ ಕೆಲ ನಾಯಕರ ಹೇಳಿಕೆಯೇ ಕಾರಣ. ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ನಿಖಿಲ್ ಅವರು ಮಂಡ್ಯದ ಅಭಿವೃದ್ಧಿಗೆ ಯಾವುದೇ ತೊಂದರೆ ಆಗಲ್ಲ. ನಾವೆಲ್ಲರೂ ಒಟ್ಟಾಗಿ ಮಂಡ್ಯ ಅಭಿವೃದ್ಧಿ ಮಾಡೋಣ ಎಂದಿದ್ದರು. ಆದರೆ ಇದೀಗ ಅವರದ್ದೇ ಪಕ್ಷದ ಸಚಿವರು ಜನರ ಮೇಲೆ ಈ ರೀತಿ ಮಾತನಾಡಿರುವುದೆಷ್ಟು ಸರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ.

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ